ಭಾವನಗರ
	ಭಾರತದ ಗುಜರಾತ್ ರಾಜ್ಯದ ಒಂದು ಜಿಲ್ಲೆ ಮತ್ತು ಜಿಲ್ಲಾ ಆಡಳಿತ ಕೇಂದ್ರ ನಗರ. ಜಿಲ್ಲೆಯ ಪೂರ್ವ ಮತ್ತು ದಕ್ಷಿಣಕ್ಕೆ ಅರಬ್ಬೀ ಸಮುದ್ರ (ಕ್ಯಾಂಬೇ ಖಾರಿ), ಪಶ್ಚಿಮಕ್ಕೆ ಅಮ್ರೇಲಿ, ವಾಯವ್ಯಕ್ಕೆ ರಾeಕೋಟೆ ಮತ್ತು ಉತ್ತರಕ್ಕೆ ಅಹಮದಾಬಾದ್ ಹಾಗೂ ಸುರೇಂದ್ರನಗರ ಜಿಲ್ಲೆಗಳಿವೆ. ಈ ಜಿಲ್ಲೆ ಉ.ಅ. 20o 23'-22' 18" ಪೂ. ರೇ. 71o 15'-73o18'ರಲ್ಲಿದೆ. ಜಿಲ್ಲಾ ವಿಸ್ತೀರ್ಣ 11,155 ಚಕಿಮೀ. ಜನಸಂಖ್ಯೆ 18,79,340 (1981).

	ಈ ಜಿಲ್ಲೆಯ ಹವೆ ಮಿಶ್ರರೂಪದ್ದು, ಕರಾವಳಿ ತೀರದಲ್ಲಿ ಹಿತವಾದ ಹವೆ ಇದ್ದರೆ, ಒಳನಾಡಿನಲ್ಲಿ ಶುಷ್ಕ ಮತ್ತು ಉಷ್ಣಹವೆ. ವಾರ್ಷಿಕ ಸುಮಾರು 61 ಸೆಂಮೀ ಮಳೆ ಬೀಳುತ್ತದೆ. ಕೆಲವೆಡೆ ಉಪ್ಪು ಮಿಶ್ರಿತ ಭೂಮಿ, ಮತ್ತೆ ಕೆಲವೆಡೆ ಫಲವತ್ತಾದ ಕಪ್ಪು ಮಣ್ಣಿನ ಬಯಲು. ಸಿಹೋರ್, ಖೊಕ್ರಾ, ಉಂದ್ ಮುಂತಾದ ಬೆಟ್ಟಸಾಲುಗಳು ಈ ಜಿಲ್ಲೆಯಲ್ಲಿ ಸಾಗಿವೆ. ಶತ್ರುಂಜೀ, ಬಗದಾ ಹಾಗೂ ಮಾಲನ ಇಲ್ಲಿಯ ಪ್ರಮುಖ ನದಿಗಳು. ಗಡೇಚಿ ನದಿಗೆ ಕಟ್ಟಿದ ಒಡ್ಡಿನಿಂದಾಗಿ ಸುಮಾರು 8 ಕಿಮೀ ಸುತ್ತಳತೆಯ ಸೊಗಸಾದ ಸರೋವರವೊಂದು ರೂಪುಗೊಂಡಿದೆ. ಇಲ್ಲಿಯ ಪ್ರಮುಖ ಬೆಳೆ ಹತ್ತಿ; ಧಾನ್ಯಗಳು, ಕಾಡುಹಣ್ಣುಗಳು, ಬೆಳೆಯುತ್ತವೆ. ಉಪ್ಪು, ಎಣ್ಣೆ, ಹಿತ್ತಾಳೆಯ ಪಾತ್ರೆಗಳು, ಬಟ್ಟೆ ಮುಂತಾದವಕ್ಕೆ ಸಂಬಂಧಿಸಿದ ಉದ್ಯೋಗಗಳು ಅಧಿಕ. ಉತ್ತಮ ತೆರನ ಬಟ್ಟೆ ತಯಾರಾಗುತ್ತದೆ. ಈ ಜಿಲ್ಲೆಯಲ್ಲಿ ಬೆಲೆಬಾಳುವ ಕಲ್ಲುಗಳು ಸಿಗುತ್ತವೆ. ಇವನ್ನು ಸ್ಥಳೀಯ ಶಿಲ್ಪಿಗಳು ವಿವಿಧ ಆಕಾರ ಕೊಟ್ಟು ವಿದೇಶಗಳಿಗೆ ಕಳುಹಿಸುವರು. ಜಿಲ್ಲೆಯಲ್ಲಿ ಜವಳಿ ಕೈಗಾರಿಕೆ ಪ್ರಮುಖವಾದದ್ದು. ಜಿಲ್ಲೆಯಲ್ಲಿ ಉತ್ತಮ ರಸ್ತೆ ಸಂಪರ್ಕವಿದೆ. ರೈಲು, ವಿಮಾನ ಸಂಪರ್ಕವಿದೆ. ವಿದ್ಯುತ್, ಅಂಚೆ, ತಂತಿ ಮುಂತಾದ ಆಧುನಿಕ ಸೌಕರ್ಯಗಳೂ ಶಾಲಾ ಕಾಲೇಜುಗಳೂ ಆಸ್ಪತ್ರೆ, ಗ್ರಂಥ ಭಂಡಾರ ಮುಂತಾದವೂ ಇವೆ.

	ಭಾವನಗರ ಜಿಲ್ಲೆಯ ಆಡಳಿತಕೇಂದ್ರ. ಕೈಗಾರಿಕೆ ಮತ್ತು ಬಂದರು ನಗರ. ಉ. ಅ. 21(45'. ಠಿU. ಡಿಇ. 72(12' ರಲ್ಲಿರುವ ನಗರವನ್ನು 1723ರಲ್ಲಿ ಭಾವುಸಿಂಘ್‍ಜೀ ಸ್ಥಾಪಿಸಿದ್ದರಿಂದ ಇದಕ್ಕೆ ಭಾವನಗರವೆಂಬ ಹೆಸರು ಬಂತೆನ್ನುವರು. ಜನಸಂಖ್ಯೆ 4,07,032 (1981). ಹತ್ತಿವ್ಯಾಪಾರಕ್ಕೆ ಮತ್ತು ಮಗ್ಗದ ಬಟ್ಟೆಗಳಿಗೆ ಈ ನಗರ ಪ್ರಸಿದ್ಧ. ಲೋಹದ ವಸ್ತುಗಳು, ಹಿತ್ತಾಳೆ ಹಾಗೂ ಕಬ್ಬಿಣದ ಪೆಟ್ಟಿಗೆಗಳು, ಬಂಡಿಗಳು, ಹಂಚು, ಇಟ್ಟಿಗೆಗಳು ಇಲ್ಲಿ ತಯಾರಾಗುತ್ತದೆ. ಇಲ್ಲಿಯ ಕಲ್ಲುಸಕ್ಕರೆ ಹಾಗೂ ರುಮಾಲು (ಪೇಟಾ) ಹೆಸರುಗಳಿಸಿವೆ. ಗೌರಿಶಂಖರ ಸರೋವರ ಅಥವಾ ಗಂಗಾ ತಲಾಬ್ ಇಡೀ ನಗರಕ್ಕೆ ನೀರುಸರಬರಾಜು ಮಾಟುತ್ತದೆ. ಇದೊಂದು ಸೊಗಸಾದ ವಿಹಾರ ಕೇಂದ್ರ.

	ಈ ನಗರ ಕೆಲವು ಹಳೆಯ ದೇಗುಲ ಮಸೀದಿಗಳಿದ್ದರೂ ಆಧುನಿಕ ಶೈಲಿಯ ಕಟ್ಟಡಗಳು ಹೆಚ್ಚು. 1895ರಲ್ಲಿ ಆರಂಭವಾದ ಬಾರ್ಟನ್ ವಸ್ತು ಸಂಗ್ರಹಾಲಯದ ಕಟ್ಟಡದಲ್ಲಿಯೇ ಮಕ್ಕಳ ವಸ್ತುಸಂತ್ರಹಾಲಯ ಹಾಗೂ ಗಾಂಧೀ ವಸ್ತುಸಂಗ್ರಯಾಲಯಗಳಿವೆ. ನ್ಯಾಯಾಲಯ, ಪೈಲೀ ಉದ್ಯಾನವನ, ವಿಕ್ಟೋರಿಯ ಪಾರ್ಕ್, ಪರ್ಸಿವಲ್ ಮಾರ್ಕೆಟ್ ಮುಂತಾದವು ಪ್ರೇಕ್ಷಣೀಯ ಸ್ಥಳಗಳು.
?
ಭಾವನಗರ ಒಂದು ಪುಟ್ಟ ರಾಜ್ಯವಾಗಿ ಗಾಹೇಲ ರಜಪೂತ ವಂಶದ ಪ್ರಭುಗಳ ಆಡಳಿತಕ್ಕೆ ಕ್ರಿ.ಶ. 1260ರಿಂದ ಒಳಪಟ್ಟಿತ್ತು. ರಾಣೇಜಿ ಇದರ ಅಧಿಪತನಾಗಿದ್ದ. ಮುಂದೆ 1723ರಲ್ಲಿ ಭಾವನಗರವನ್ನು ಸ್ಥಾಪಿಸಿದ ಭಾವುಸಿಂಘಜೀ ಆತನ ಮಗ ರಾವಲ ಅಖೇರಾಜಿ ಹಾಗೂ ಮೊಮ್ಮಗ ವಖತ್‍ಸಿಂಘರು ತಮ್ಮ ರಾಜ್ಯದ ವ್ಯಾಪಾರಾಭಿವೃದ್ಧಿಗಾಗಿ ಹಾಗೂ ಕಡಲ್ಗಳ್ಳರ ಮತ್ತು ಲೂಟಿಕಾರರ ಹಾವಳಿ ತಡೆಯುವುದಕ್ಕಾಗಿ ತುಂಬ ಶ್ರಮಿಸಿದರು. 1759ರಲ್ಲಿ ಇಲ್ಲಿಯ ಸುಂಕದ ನಾಲ್ಕನೆಯ ಒಂದು ಭಾಗ ಬ್ರಿಟಿಷರಿಗೆ ಸಂದಾಯವಾಗುವ ವ್ಯವಸ್ಥೆ ಏರ್ಪಟ್ಟಿತ್ತು. 1771ರಲ್ಲಿ ಲೂಟಿಕಾರ ಕೂಲಿಯವರ ವಶವಾಗಿದ್ದ ತಲಾಜ ಹಾಗೂ ಮಹುವ ಪ್ರದೇಶಗಳಿಗಾಗಿ ನಡೆದ ಹೋರಾಟಗಳಲ್ಲಿ ರಾವಲ ಅಖೋರಾಜಿ ಬ್ರಿಟಿಷರ ಪರವಾಗಿದ್ದ. ಮುಂದೆ 1773ರಲ್ಲಿ ಆತನ ಮಗ ವಖತಸಿಂಘ ಬ್ರಿಟಿಷರಿಗೆ 75,000 ರೂಪಾಯಿಗಳನ್ನು ನೀಡಿ ತಲಾಜವನ್ನು ಪಡೆದುಕೊಂಡ. ಗುಜರಾತ್ ಮತ್ತು ಕಾಥಿಯವಾಡ ಪ್ರದೇಶ ಪೇಶ್ವೆಗಳ ಮತ್ತು ಗಾಯಕವಾಡರ ನಡುವೆ ವಿಭಜಿತವಾದಾಗ ಭಾವನಗರ ಮತ್ತು ಸುತ್ತಮುತ್ತಲ ಕೆಲವು ಭಾಗಗಳು ಪೇಶ್ವೆಯರ ಅನಂತರ ಬ್ರಿಟಿಷರ ಸರ್ಕಾರ ರದ್ದುಗೊಳಿಸಿತು. 1873ರಲ್ಲಿ ಭಾವನಗರ ಮತ್ತು ಧೋಲೆರಾ ನಡುವೆ ತಂತಿ ಸಂದೇಶ ವ್ಯವಸ್ಥೆ ಏರ್ಪಟ್ಟಿತ್ತು. ಭಾವನಗರ ಒಂದು ವಿದ್ಯುದುತ್ಪಾದನಾ ಕೇಂದ್ರ., ಇಲ್ಲಿ ಶಾಲಾ ಕಾಲೇಜುಗಳು ಆಸ್ಪತ್ರೆ ಮುಂತಾದ ನಾಗರೀಕ ಸೌಲಭ್ಯಗಳು ಇವೆ. ಬಂದರು ಹಾಗೂ ಕೈಗಾರಿಕಾ ನಗರವೆಂದು ಪ್ರಸಿದ್ಧವಾಗಿದೆ. ರೈಲುನಿಲ್ದಾಣ ಕೇಂದ್ರ ಹಾಗೂ ವಿಮಾನ ನಿಲ್ದಾಣಗಳಾಗಿವೆ.	
(ಎಚ್.ಎಂ.ಎನ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ